ಭಾಟ್‍ಪಾರ ಭಾರತದ ಪಶ್ಚಿಮ ಬಂಗಾಲ ರಾಜ್ಯದ ಇಪ್ಪತ್ತನಾಲ್ಕು ಪರಗಣ ಜಿಲ್ಲೆಯ ಜಲ್‍ಪೈಗುರಿ ವಿಭಾಗಕ್ಕೆ ಸೇರಿದ ಒಂದು ಕೈಗಾರಿಕಾ ನಗರ. ಉ. ಅ. 220 52 ಪೂ.ರೇ. 880 24 ನಲ್ಲಿದೆ. ಕಲ್ಕತ್ತ ನಗರದ ಉತ್ತರಕ್ಕೆ ಹೂಗ್ಲಿ ನದಿಯ ಪೂರ್ವದ ಎಡದಂಡೆ ಮೇಲಿದೆ. ಜನಸಂಖ್ಯೆ 265 419 (1982). 

ಈ ನಗರ ಹಿಂದಿನಿಂದ ನಡೆದುಬಂದ ಪರಂಪರಾಗತ ಸಂಸ್ಕøತ ಅಧ್ಯಯನ ಸಂಪ್ರದಾಯವನ್ನು ಉಳಿಸಿಕೊಂಡು ಬಂದಿದ್ದು ಪ್ರಸಿದ್ಧಿ ಪಡೆದಿದೆ. ಇಲ್ಲಿ ಉಚಿತ ವಿದ್ಯಾಭ್ಯಾಸ ನೀಡುವ ಅನೇಕ ಸಂಸ್ಕøತ ವಿದ್ಯಾಲಯಗಳಿವೆ. ಕಾಗದ, ಹತ್ತಿ ಹಾಗೂ ಅನೇಕ ಸೆಣಬಿನ ಕಾರ್ಖಾನೆಗಳು ಇವೆ. ಇದೊಂದು ದೊಡ್ಡ ಕೈಗಾರಿಕಾ ಕೇಂದ್ರ. 1899ರಲ್ಲಿ ಈ ನಗರದ ಉತ್ತರಕ್ಕಿರುವ ನೈಹಾತಿ ನಗರದಿಂದ ಇದನ್ನು ಬೇರ್ಪಡಿಸಿ ಸ್ವತಂತ್ರ ನಗರಸಭೆಯುಳ್ಳ ನಗರವಾಗಿ ಪರಿವರ್ತಿಸಲಾಯಿತು. ಬಾರಕ್‍ಪುರ್, ಟಿಟಾಗರ್, ಬಾರಾನಗರ್‍ಗಳ ಮುಖಾಂತರ ದಕ್ಷಿಣದಲ್ಲಿಯ ಕಲ್ಕತ್ತಾಕ್ಕೂ ಮತ್ತು ನೈಹಾತಿ ಮುಖಾಂತರ ಉತ್ತರದಲ್ಲಿರುವ ಬರ್ಹಾಂಪುರದೊಂದಿಗೂ ರೈಲು ಮತ್ತು ರಸ್ತೆ ಮಾರ್ಗಗಳ ಸಂಪರ್ಕವಿದೆ. ಕಲ್ಕತ್ತಾದ ಎರಡು ಮುಖ್ಯ ಕೈಗಾರಿಕಾ ನಗರ ಸಮೂಹದಲ್ಲಿ ಒಂದು ಟಿಟಾಗರ್ ಎರಡನೆಯದು ಭಾಟ್‍ಪಾರಾ. ಕಲ್ಕತ್ತಾ ಮತ್ತಿತರ ಕೈಗಾರಿಕಾ ನಗರಗಳಂತೆ ಭೂರಹಿತ ಕೂಲಿಗಾರ ಅಸಂಖ್ಯಾತ ವಲಸೆಗಾರರು ಈ ನಗರಕ್ಕೂ ಬಂದು ತುಂಬುತ್ತಿದ್ದು ನಗರ ಹಿಡಿತತಪ್ಪಿ ವಿಸ್ತರಿಸುತ್ತಿದೆ.
(ಬಿ.ಜಿ.ಟಿಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ